ಪಠ್ಯಕ್ರಮ 
ಒಂದು ಪಾಠಶಾಲೆ ಅಥವಾ ಕಾಲೇಜು ತನ್ನ ವಿದ್ಯಾರ್ಥಿಗಳನ್ನು ಒಂದು ಸರ್ಟಿಫಿಕೇಟ್, ಡಿಪ್ಲೊಮ, ಪದವಿ ಅಥವಾ ಒಂದು ವೃತ್ತಿಗೆ ಸಿದ್ಧರನ್ನಾಗಿ ಮಾಡಲು ವ್ಯವಸ್ಥಿತ ರೀತಿಯಲ್ಲಿ ರೂಪಿಸಿರುವ ವಿಷಯಗಳ ಹಾಗೂ ಚಟುವಟಿಕೆಗಳ ಯೋಜನೆ (ಸಿಲಬಸ್). ಸಾಮಾನ್ಯವಾಗಿ ಪಠ್ಯಕ್ರಮವೆಂದರೆ ಓದಿ ತಿಳಿದುಕೊಳ್ಳಲು ಶಾಲಾಕಾಲೇಜುಗಳಲ್ಲಿ ಗೊತ್ತುಮಾಡಿರುವ ಗ್ರಂಥಜ್ಞಾನವೆಂಬ ಸಂಕುಚಿತಭಾವನೆ ಇತ್ತೀಚಿನವರೆಗೂ ಪ್ರಚಾರದಲ್ಲಿತ್ತು. ಆದರೆ ಅದು ಬೋಧಿಸಬೇಕಾದ ಬರೀ ಜ್ಞಾನ ಮಾತ್ರವಲ್ಲ. ವಿಯಾರ್ಥಿಗಳಿಗೆ ಅವರ ಶೈಕ್ಷಣಿಕ ಬೆಳವಣಿಗೆಗಾಗಿ ಶಿಕ್ಷಣ ಸಂಸ್ಥೆ ತನ್ನ ನೇತೃತ್ವದಲ್ಲಿ ಒದಗಿಸುವ ಎಲ್ಲ ಅನುಭವಗಳ ಸಮಗ್ರತೆಯನ್ನು ಅದು ಪ್ರತಿನಿಧಿಸುತ್ತದೆ. ಶಾಲೆ ಅಥವಾ ಕಾಲೇಜಿನಲ್ಲಿ ಬೋಧಿಸುವ ವಿವಿಧ ವಿಷಯಗಳು, ಅಲ್ಲಿನ ಸಂಘ ಸಂಸ್ಥೆಗಳು ಏರ್ಪಡಿಸುವ ವಾಚನ ಚರ್ಚೆ ನಾಟಕ ಗೋಷ್ಠಿ ಮುಂತಾದವುಗಳ ಕಾರ್ಯಕ್ರಮಗಳು, ಅಲ್ಲಿನ ಸಾಮಾಜಿಕ ಜೀವನದಿಂದ ದೊರಕುವ ಅನುಭವಗಳು, ಆಟಪಾಟಗಳು, ಸ್ಪರ್ಧೆ, ಪ್ರವಾಸ, ಅಧ್ಯಾಪಕರ ಮತ್ತು ಹಿರಿಯರ ಆದರ್ಶ ಮುಂತಾದ ಪಠ್ಯೇತರ ಚಟುವಟಿಕೆಗಳು- ಇವೆಲ್ಲವೂ ಅದರಲ್ಲಿ ಸೇರಿರುತ್ತವೆ.

	ಪಠ್ಯಕ್ರಮದ ನಿರ್ಮಾಪಕರು : ಶಿಕ್ಷಣದ ಆಡಳಿತ ಕೇಂದ್ರೀಕೃತವಾಗಿರುವ ಫ್ರಾನ್ಸ್, ಸೋವಿಯತ್ ದೇಶ, ಚೀನಾ ಮುಂತಾದ ರಾಷ್ರಗಳಲ್ಲಿ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ರಚನೆಯಾಗುವ ಸಮಿತಿ ಅದನ್ನು ರೂಪಿಸುವುದು. ಶಿಕ್ಷಣದ ಆಡಳಿತ ಅಷ್ಟಾಗಿ ಕೇಂದ್ರೀಕೃತವಾಗಿರದ ಅಥವಾ ವಿಕೇಂದ್ರೀಕೃತವಾಗಿರುವ ಅಮೆರಿಕದ ಸಂಯುಕ್ತಸಂಸ್ತಾನಗಳು, ಬ್ರಿಟನ್, ಜರ್ಮನಿ ಮುಂತಾದ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಸರ್ಕಾರ ಕೇವಲ ಹೆಗ್ಗೆರೆಗಳ ರೂಪದಲ್ಲಿ ಪಠ್ಯಕ್ರಮವನ್ನು ರೂಪಿಸಿ ರಾಜ್ಯ ಸರ್ಕಾರಗಳಿಗೂ ಶಾಲಾಮಂಡಲಿಗಳಿಗೂ ತಕ್ಕಷ್ಟು ಸ್ವಾತಂತ್ರ್ಯವನ್ನು ನೀಡಿರುತ್ತವೆ. ಆ ಮೂಲಕ ಆಯಾ ರಾಜ್ಯ ಅಥವಾ ಸಮಾಜ ಜೀವನಕ್ಕೆ ಯುಕ್ತವೆನಿಸುವಂತೆ ರಾಷ್ಟ್ರೀಯ ಹೆಗ್ಗೆರೆಯ ಚೌಕಟ್ಟಿನಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡಿಕೊಳ್ಳುವ ಅವಕಾಶವಿರುತ್ತದೆ. ಶಿಕ್ಷಣ ಕೇವಲ ರಾಜ್ಯಸರ್ಕಾರದ ವಿಷಯವಾಗಿರುವ ದೇಶಗಳಲ್ಲಿ ಆಯಾ ರಾಜ್ಯಸರ್ಕಾರ ನೇಮಿಸುವ ಸಮಿತಿಗಳು ಪಠ್ಯಕ್ರಮವನ್ನು ಸೂಚಿಸುತ್ತವೆ. ಕಾಲೇಜು ವಿಶ್ವವಿದ್ಯಾಲಯ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವ ವಿದ್ಯಾಲಯದ ವಿದ್ವನ್ಮಂಡಲಿ (ಅಕೆಡೆಮಿಕ್ ಕೌನ್ಸಿಲ್) ಅಥವಾ ಜ್ಞಾನಪರಿಷತ್ತುಗಳು (ಫ್ಯಾಕಲ್ಟಿ) ನೇಮಿಸುವ ಸಮಿತಿಗಳು ಈ ಕಾರ್ಯವನ್ನು ನಿರ್ವಹಿಸುತ್ತವೆ. ಸಾಮಾನ್ಯವಾಗಿ ಪಠ್ಯಕ್ರಮವನ್ನು ರೂಪಿಸುವ ಸಮಿತಿಗಳಲ್ಲಿ ಮುಖ್ಯವಾಗಿ ಬೋಧಿಸುವ ಅಧ್ಯಾಪಕರೂ ಆಯಾ ಕ್ಷೇತ್ರಕ್ಕೆ ಸಂಬಧಿಸಿದ ಇತರರೂ ಇರುವುದುಂಟು.

	ಪಠ್ಯಕ್ರಮದ ರಚನೆಗೆ ಆಧಾರಗಳು: ಪಠ್ಯಕ್ರಮವನ್ನು ಯಾರೇ ರೂಪಿಸಲು ಅದು ಶಿಕ್ಷಣದ ಉದ್ದೇಶವನ್ನು ಸಾಧಿಸುವಂತಿರಬೇಕು. ಸಾಮಾನ್ಯವಾಗಿ ಮಕ್ಕಳ ಮನಸ್ಸು ದೇಹ ಮತ್ತು ಆತ್ಮ ಸಂಸ್ಕರಣವಾಗಿ ಅವರು ಸಮಾಜ ಜೀವನದಲ್ಲೆ ಯಶಸ್ವಿಯಾಗಿ ಹೊಂದಿಕೊಂಡು ಸ್ವಾವಲಂಬಿಗಳಾಗಿ ಬಾಳುವಂತಾಗಬೇಕೆಂಬುದು ಶಿಕ್ಷಣದ ಉದ್ದೇಶವೆಂದು ಸ್ಥೂಲವಾಗಿ ಹೇಳುವುದಾದರೂ ಕಾಲ, ದೇಶ, ವ್ಯಕ್ತಿ, ಶಿಕ್ಷಣದ ಅಂತಸ್ತು ವೈವಿಧ್ಯ- ಇವನ್ನನುಸರಿಸಿ ವ್ಯತ್ಯಾಸವಾಗುತ್ತದೆ. ಜೊತೆಗೆ ಕಲಿಯುವ ಮಕ್ಕಳಲ್ಲೂ ಭಿನ್ನತೆಯಿರುವುದರಿಂದ ಪಠ್ಯಕ್ರಮವನ್ನು ರಚಿಸುವಾಗ ಆ ಭಿನ್ನತೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇತ್ತೀಚಿನವರಗೂ ಮನಸ್ಸು ಬಿಡಿಬಿಡಿಯೂ ಪ್ರತ್ಯೇಕವೂ ಆದ ಹಲವು ಶಕ್ತಿಗಳನ್ನು ಹೊಂದಿರುವುದೆಂಬ ತಪ್ಪು ಕಲ್ಪನೆಯ ಆಧಾರದ ಮೇಲೆ ಆ ಮನಶಕ್ತಿಯನ್ನು ಪಟ್ಟಿ ಮಾಡಿ, ಆಯಾ ಮನಶಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಬಲ್ಲ ವಿಷಯವನ್ನು ಹುಡುಕಿ ಅವನ್ನೆಲ್ಲ ಪಟ್ಟಿ ಮಾಡಿ ಸೇರಿಸಿ ಪಠ್ಯಕ್ರಮವನ್ನು ರೂಪಿಸಲಾಗುತ್ತಿತ್ತು. ಮನಶಕ್ತಿಗಳ ಕಸರತ್ತಿನ ಈ ತತ್ತ್ವದೃಷ್ಟಿ ಸಾಧುವಲ್ಲವೆಂದು ಈಗ ಮನಗಂಡಿದ್ದೇವೆ. ಆಧುನಿಕ ಮನಶ್ಶಾಸ್ತ್ರ ಮನಸ್ಸು ಅನೇಕ ಶಕ್ತಿಗಳಪ್ರತ್ಯೇಕ ಘಟಕಗಳಲ್ಲವೆಂದೂ ಮನಸ್ಸು ಸಮಗ್ರವಾಗಿ ಕೆಲಸಮಾಡುವದೆಂದೂ ತೋರಿಸಿದ ಮೇಲೆ ಆ ರೀತಿ ಪಠ್ಯಕ್ರಮವನ್ನು ರೂಪಿಸುವುದು ನಿಂತಿದೆ. ಯಾವ ವಿಷಯವನ್ನೆ ಆಗಲಿ ಅದರ ಉಪಯುಕ್ತತೆಯ ದೃಷ್ಟಿಯಿಂದ ಪಠ್ಯಕ್ರಮದಲ್ಲಿ ಸೇರಿಸಬೇಕು ಹೊರತು ಅದರ ಕಸರತ್ತಿನ ದೃಷ್ಟಿಯಿಂದಲ್ಲವೆಂಬ ಅಂಶ ಪ್ರಚಾರಕ್ಕೆ ಬಂತು. ಈ ದೃಷ್ಟಿ ಕೊನೆಗೆ ಕೇವಲ ಜೀವನೋಪಾಯದ ತತ್ತ್ವ ದೃಷ್ಟಿಯಿಂದ ಪಠ್ಯಕ್ರಮದಲ್ಲಿ ವಿಷಯಗಳನ್ನು ಸೇರಿಸಬೇಕೆಂಬ ಭಾವನೆಗೆ ಎಡೆಗೊಟ್ಟಿತಾಗಿ ವೃತ್ತಿ ವಿಷಯಗಳಿಗೆ ಪ್ರಾಧಾನ್ಯ ಬರಹತ್ತಿತು. ಆದರೆ ಮಾನವನಿಗೆ ಜೀವನೋಪಾಯದ ಶಿಕ್ಷಣವೊಂದೇ ಸಾಲದು, ಅವನ ಮಾನವೀಯ ಹಾಗೂ ಸಾಂಸ್ಕøತಿಕ ಶಿಕ್ಷಣವೂ ಸಾಧನೆಯಾಗಬೇಕೆಂಬ ಪರಿಜ್ಞಾನ ಬೆಳೆದು ಆ ಉದ್ದೇಶ ಸಾಧನೆಗೆ ನೆರವಾಗಬಲ್ಲ ವಿಷಯಗಳೂ ಪಠ್ಯಕ್ರಮದಲ್ಲಿ ಸೇರಹತ್ತಿವೆ. ಆದ್ದರಿಂದ ವ್ಯಕ್ತಿಯ ಶಿಕ್ಷಣದಲ್ಲಿ ಪಾತ್ರವಹಿಸುವ ಪಠ್ಯಕ್ರಮ ತತ್ತ್ವಶಾಸ್ತ್ರ ಮನಶ್ಶಾಸ್ತ್ರ ಸಮಾಜಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ, ನೀತಿಶಾಸ್ತ್ರ ಮುಂತಾದವು ಸೂಚಿಸುವ ಆಧಾರಗಳನ್ನು ಬಳಸಿಕೊಂಡು ಆ ಅಂತಸ್ತಿನ ಮಕ್ಕಳ ಸಾಮಥ್ರ್ಯ ಆಸಕ್ತಿ ಅವಶ್ಯಕತೆ ಹಾಗೂ ಅವರು ಬಾಳಬೇಕಾದ ದೇಶ ಅಥವಾ ಸಮಾಜ ಅಂಗೀಕರಿಸುವ ನೈತಿಕಮೌಲ್ಯ ಇವನ್ನು ಆಧಾರ ಮಾಡಿಕೊಂಡು ರೂಪುಗೊಳ್ಳಬೇಕಾಗಿದೆ.

	ಮೇಲಿನ ಆಧಾರಗಳು ಪಠ್ಯಕ್ರಮದ ರಚನೆಗೆ ಸ್ಥೂಲವಾಗಿ ನೆರವಾಗಬಹುದಾದರೂ ಆಯಾ ಅಂತಸ್ತಿನ ಮಕ್ಕಳ ವಯೋಮಾನದ ಬೆಳವಣೆಗೆಯ ಸ್ವರೂಪವನ್ನನುಸರಿಸಿ ವ್ಯತ್ತಾಸ ಕಲ್ಪಿಸಬೇಕಾಗುತ್ತದೆ. ಶಿಶುವಿಹಾರದಲ್ಲಿ ಮಕ್ಕಳು ಮಾತಾಡುವ ಸಂಘಜೀವನದಲ್ಲಿ ಸರಾಗವಾಗಿ ನಡೆದುಕೊಳ್ಳುವ ಹಾಗೂ ದಿನಚರಿ ಜೀವನದ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ನೆರವಾಗತಕ್ಕ ಚಟುವಟಿಕೆಯ ಕಾರ್ಯ ಕ್ರಮವೂ ಆರೋಗ್ಯ ಜೀವನಕ್ಕೆ ಸಂಬಂಧಿಸಿದ ವ್ಯವಸ್ಥೆಯೂ ಸೇರಿರುತ್ತವೆ. ಪ್ರಾಥಮಿಕ ಶಾಲೆಯಲ್ಲಿ ಓದುಗಾರಿಕೆ, ಬರವಣಿಗೆ, ಲೆಕ್ಕ-ಇವುಗಳ ಮೂಲರೂಪದ ಕೌಶಲ್ಯಗಳಿಗೆ ಪ್ರಾಧಾನ್ಯವಿರಬೇಕು. ಅಲ್ಲಿನ ಉತ್ತರಾರ್ಧದಲ್ಲಿ ಚರಿತ್ರೆ, ಭೂವಿವರಣೆ ವಿಜ್ಞಾನ, ಆರೋಗ್ಯ, ಚಿತ್ರಕಲೆ, ಸಂಗೀತ, ದೈಹಿಕ ಶಿಕ್ಷಣ ಮುಂತಾದ ವಿಷಯಗಳೂ ಸೇರಬೇಕು. ಹಿಂದೆ ಮಕ್ಕಳು ಸಾಧಿಸಿರುವ ಮೂಲ ಕೌಶಲ್ಯವನ್ನು ಬಳಸಿಕೊಂಡು ಪ್ರೌಢಶಾಲೆಯಲ್ಲಿ ಜ್ಞಾನಾರ್ಜನೆ ಮಾಡಲು ನೆರವಾಗುವ ಭಾಷೆ ಸಾಹಿತ್ಯ ಚರಿತ್ರೆ ಭೂವಿವರಣೆ ವಿಜ್ಞಾನ ಗಣಿತ ಮುಂತಾದ ಸರ್ವಸಾಮಾನ್ಯ ವಿಷಯಗಳೂ ಅಭಿರುಚಿ ಆಸಕ್ತಿಗಳನ್ನು ಬೆಳೆಸಲು ಐಚ್ಛಿಕ ವಿಷಯಗಳೂ ದೈಹಿಕ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳೂ ಸೇರಬೇಕು. ಮುಂದೆ ಉನ್ನತ ಶಿಕ್ಷಣದಲ್ಲಿ ಆಳವಾದ ಜ್ಞಾನವನ್ನು ದೊರಕಿಸಿ ವಿಚಾರ ದೃಷ್ಟಿಯನ್ನು ಪೋಷಿಸಬಲ್ಲ ಪಠ್ಯಕ್ರಮ ಅಗತ್ಯವೆನಿಸುತ್ತದೆ. ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿಯ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣದ ಜೊತೆಗೆ ಆ ವೃತ್ತಿಗೆ ಸಂಬಂಧಿಸಿದ ಸಾಮಾನ್ಯ ಪಠ್ಯ ವಿಷಯಗಳೂ ಸೇರಬೇಕು.

	ಒಂದು ತರಗತಿಯ, ಒಂದು ವ್ಯಾಸಂಗ ವಿಷಯದ ಅಥವಾ ಒಂದು ಶಿಕ್ಷಣ ಸಮಸ್ಥೆಯ ಪಠ್ಯಕ್ರಮವನ್ನು ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡು ಎಷ್ಟೇ ಶಾಸ್ತ್ರೀಯವಾಗಿ ರಚಿಸದಿದ್ದರೂ ಅದನ್ನು ಅಂದಿಗಂದಿಗೆ ಪುನರ್ರಚಿಸುವ ಕಾರ್ಯ ಅಗತ್ಯವಾಗುತ್ತದೆ. ಇದಕ್ಕೆ ದಿನದಿನಕ್ಕೂ ಜೀವನದಲ್ಲಾಗುತ್ತಿರುವ ಬದಲಾವಣೆಗಳೇ ಕಾರಣ. ಬಾಹ್ಯಾಕಾಶಯುಗಕ್ಕೂ ಅದರ ಹಿಂದಿನ ಪರಮಾಣುಯುಗ, ವಾಯುಯಾನಯುಗ, ವಿದ್ಯುಚ್ಛಕ್ತಿಯುಗ, ಹಬೆಯ ಯಂತ್ರದ ಯುಗ-ಮುಂತಾದ ಯುಗಗಳ ಆಹಾರ ಉಡುಪು ವಾಸ್ಥಳ ಸಾರಿಗೆ ಸಂಪರ್ಕಗಳು ಭಾವನೆ ವರ್ತನೆ ಆದರ್ಶ ಮೌಲ್ಯ ರಾಜಕೀಯ ಆರ್ಥಿಕ ಧಾರ್ಮಿಕ ಮುಂತಾದ ಜೀವನವಿಧಾನಗಳಲ್ಲಿ ಕ್ರಮಕ್ರಮವಾಗಿ ಆಗಿರುವ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಈಚೆಗೆ ಅಂಥ ಬದಲಾವಣೆ ತೀರ ವೇಗವಾಗಿ ಆಗುತ್ತಿದೆ.

	ಪಠ್ಯಕ್ರಮದ ರಚನೆಯಲ್ಲಿ ನೂತನ ಪ್ರವೃತ್ತಿಗಳು : ಉನ್ನತ ಶಿಕ್ಷಣದ ಬೇರೆ ಬೇರೆ ಪದವಿ ಡಿಪ್ಲೊಮ ಮುಂತಾದವುಗಳ ಪಠ್ಯಕ್ರಮದಲ್ಲಿ ಅಂಥ ಮಹತ್ತರ ಬದಲಾವಣೆಗಳು ಕಂಡುಬರುವುದಿಲ್ಲ. ಬಹುಮಟ್ಟಿಗೆ ವಿವಿಧ ಜ್ಞಾನಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ವಿಶಿಷ್ಟವೂ ತರ್ಕಬದ್ಧವೂ ಆಗಿರುವಂತೆ ರೂಪಿಸುವ ಹಿಂದಿನ ಪದ್ಧತಿ ಮುಂದುವರಿಯುತ್ತಿದೆ. ಜ್ಞಾನಾರ್ಜನೆಗೆ ಪ್ರಾಧಾನ್ಯವುಳ್ಳ ಈ ಹಂತದ ಶಿಕ್ಷಣದಲ್ಲಿ ವಿಷಯಗಳ ವ್ಯವಸ್ಥಿತಹಾಗೂ ತರ್ಕಬದ್ಧ ಸ್ವರೂಪದಲ್ಲಿ ವ್ಯಾಸಂಗ ಮಾಡುವುದು ಅಗತ್ಯವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ಸಮಕೀರ್ಣ ಆಲೋಚನಾ ಸರಣಿಯನ್ನು ಅನುಸರಿಸಬಲ್ಲವರಾಗಿರುವುದರಿಂದ ಅಂಥ ಪಠ್ಯಕ್ರಮ ಉಚಿತವೆಂಬ ಭಾವನೆ ಮುಂದುವರಿಯುತ್ತಿದೆ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಇನ್ನೂ ಆ ಸಾಮಥ್ರ್ಯವನ್ನು ರೂಢಿಸಿಕೊಂಡಿರುವುದಿಲ್ಲ. ಆದ್ದರಿಂದ ಆ ಮಟ್ಟದ ಶಿಕ್ಷಣಕ್ಕೆ ಅನುಕೂಲಿಸುವಂತೆ ಕೆಲವು ನೂತನ ರೀತಿಯ ಪಠ್ಯಕ್ರಮಗಳು ಬಳಕೆಗೆ ಬಂದಿವೆ. ಡಾಲ್ಟನ್ ಪದ್ಧತಿ, ವಿನೆಟ್ಕ ಪದ್ಧತಿ-ಇವು ಅಂಥ ನೂತನ ಪ್ರವೃತ್ತಿಗಳು. ಪ್ರಾಥಮಿಕ ಹಂತದ ಮಕ್ಕಳು ತರ್ಕಬದ್ಧವಾಗಿ ಹೆಣೆದಿರುವ ವಿಷಯಗಳನ್ನು ಅರಿತುಕೊಳ್ಳವುಷ್ಟು ಪ್ರಬುದ್ಧರಲ್ಲ ; ಅವರ ಆಲೋಚನಾಶಕ್ತಿ ಬೆಳೆದಿರುವುದಿಲ್ಲ. ಮೇಲಾಗಿ ಅವರ ಆಸಕ್ತಿಗಳು ಭಿನ್ನ ರೀತಿಯವಾಗಿರುತ್ತವೆ. ಆದ್ದರಿಂದ ಅವರಿಗೆ ಪಠ್ಯಕ್ರಮವನ್ನು ರೂಪಿಸುವಾಗ ಅವರ ಆಸಕ್ತಿಗಳು, ಸಾಮಥ್ರ್ಯಗಳು, ಅವಶ್ಯಕತೆಗಳು ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅನೇಕ ರೀತಿಯ ಪಠ್ಯಕ್ರಮಗಳು ಪ್ರಚಾರಕ್ಕೆ ಬಂದಿವೆ. ಅವನ್ನು ಮುಂದೆ ಸ್ಥೂಲವಾಗಿ ವಿವರಿಸಿದೆ.
 
	1 ಶಿಶುಕೇಂದ್ರಿತ ಪಠ್ಯಕ್ರಮ : ಮಕ್ಕಳ ಮಾನಸಿಕ, ಸಾಮಾಜಿಕ ಹಾಗೂ ದೈಹಿಕ ಸ್ಥಿತಿಗತಿಗಳನ್ನು ಆಧಾರಮಾಡಿಕೊಂಡು ಅದಕ್ಕೊಪ್ಪುವಂತೆ ಈ ಪಠ್ಯಕ್ರಮದಲ್ಲಿ ಎಲ್ಲವೂ ಅವರ ಹಿತದೃಷ್ಟಿಯಿಂದ ಸೇರಿದ ಅಂಶಗಳಾಗಿರುತ್ತವೆ. ಅವರ ಆಸಕ್ತಿ ಸಾಮಥ್ರ್ಯ ಸದಸ್ಯದ ಆವಶ್ಯಕತೆಗಳು-ಈ ಅಂಶಗಳನ್ನು ಈಡೇರಿಸುವಂಥ ಆಟ, ಸಂವಾದ, ಉದ್ಯಮ ಮುಂತಾದ ಚಟುವಟಿಕೆಗಳನ್ನು ಅದು ಒಳಗೊಂಡಿರುತ್ತದೆ.

 	2. ಚಟುವಟಿಕೆ ಪಠ್ಯಕ್ರಮ : ಬೋಧಿಸಬೇಕಾದ ಬೇರೆ ಬೇರೆ ವಿಷಯಗಳನ್ನೂ ಅವುಗಳ ಉಪಭಾಗಗಳನ್ನಾಗಿ ವಿವರಿಸಿ ಕೇವಲ ಭಾಷಾ ಪ್ರಧಾನವಾದ ಪಠ್ಯಕ್ರಮವಾಗಿರದೆ ಇದು ಅನೇಕ ಚಟುವಟಿಕೆಗಳನ್ನೊಗೊಂಡ ಕ್ರಮವಾಗಿದೆ. ಕೇಳಿ ಕಲಿಯುವುದಕ್ಕಿಂತ ಮಾಡಿಕಲಿಯುವುದು ಹೆಚ್ಚು ಪರಿಣಾಮಕಾರಿಯಾಗಿರುವುದೆಂಬ ತತ್ವದ ಆಧಾರದ ಮೇಲೆ ಈ ಪಠ್ಯಕ್ರಮ ರೂಪುಗೊಂಡಿರುತ್ತದೆ. ಜೊತೆಗೆ ಆ ಚಟುವಟಿಕೆಗಳು ವಿದ್ಯಾರ್ಥಿಗಳ ಆಸಕ್ತಿಗಳಿಗೂ ಅನುಗುಣವಾಗಿರುವುದರಿಂದ ಅವರು ಅವನ್ನು ಉತ್ಸಾಹದಿಂದ ಆಹ್ವಾನಿಸುವರು.
 
	3 ಸಮಸ್ಯಾಕೇಂದ್ರಿತ ಪಠ್ಯಕ್ರಮ : ನಿತ್ಯಜೀವನದಲ್ಲಿ ಮಕ್ಕಳು ಎದುರಿಸಬಹುದಾದ ಸಮಸ್ಯೆಗಳನ್ನು ಆಯ್ದು ಈ ಪಠ್ಯಕ್ರಮವನ್ನು ರೂಪಿಸಲಾಗಿದೆ. ವಿಷಯ ಸಂಗ್ರಹ ಆಚರಣೆ ಪರಿಣಾಮದ ಪರಿಶೀಲನೆ-ಇವೆಲ್ಲ ಸೇರಿದ ಆ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣವನ್ನು ಇದು ಒದಗಿಸುವಂತಿರುತ್ತದೆ.
 
	4 ಸಮಾಜ ಕೇಂದ್ರಿತ ಪಠ್ಯಕ್ರಮ : ಮಕ್ಕಳು ವಾಸಿಸುವ ಸಮಾಜ ಸನ್ನಿವೇಶಗಳನ್ನು ಆಯ್ದು ಶಾಲೆಯಲ್ಲಿ ಆಚರಿಸಲು ಅನುಕೂಲಿಸುವಂತೆ ಸರಳಗೊಳಿಸಿ ಅವುಗಳ ಬಗ್ಗೆ ಅಗತ್ಯ ವಿಷಯಗಳನ್ನು ಜೋಡಿಸಿ ರೂಪಿಸಿರುವ ಈ ಪಠ್ಯಕ್ರಮದಿಂದ ಮಕ್ಕಳು ಸಮಾಜ ಜೀವನದಲ್ಲಿ ಯಶಸ್ವಿಯಾಗಿ ಬಾಳಲು ಅನುಕೂಲಿಸುವ ಜ್ಞಾನ ಅನುಭವ ಮನೋಭಾವ ಮುಂತಾದವನ್ನು ಪಡೆದುಕೊಳ್ಳಬಲ್ಲರು.

 	5 ಉದ್ಯಮಕೇಂದ್ರ ಪಠ್ಯಕ್ರಮ : ಲಾಭದಾಯಕವಾದಹಾಗೂ ಸಮಾಜದಲ್ಲಿ ಆಚರಣೆಯಲ್ಲಿರುವ ಉದ್ಯಮವೊಂದರ ಸುತ್ತ ವಿವಿಧ ವ್ಯಾಸಂಗ ವಿಷಯಗಳ ಜ್ಞಾನವನ್ನು ಜೋಡಿಸಿದಂತೆ ರಚನೆಯಾಗಿರುವ ಈ ಪಠ್ಯಕ್ರಮವನ್ನು ಭಾರತದಲ್ಲಿ ಆರಂಭಿಸಲಾದ ಮೂಲ ಶಿಕ್ಷಣದಲ್ಲಿ ಅನುಗೊಳಿಸಲಾಗಿದೆ. ಉದ್ಯಮವನ್ನು ಆಚರಿಸುವಾಗ ಅಗತ್ಯಬಿದ್ದಂತೆ ಸಾಂಪ್ರದಾಯಿದ ವಿಷಯಗಳ ಜ್ಞಾನವನ್ನೂ ಮಕ್ಕಳು ಪಡೆದುಕೊಳ್ಳುವರು. ಉದ್ಯಮವನ್ನು, ಆಚರಿಸುವಾಗಿ ಅಗತ್ಯವಾಗಿ ಕಲಿಯಬೇಕಾಗಿ ಬರುವ ಅಂಶಗಳಾದ್ದರಿಂದ ವಿದ್ಯಾರ್ಥಿಗಳು ಅವನ್ನು ಕಲಿಯಲು ಆಸಕ್ತಿ ತೋರುವುದರಿಂದ ಕಲಿವು ಪರಿಣಾಮಕಾರಿಯಾಗುತ್ತದೆ. ಅಮೆರಿಕದಲ್ಲಿ ಜಾನ್ ಡ್ಯೈಯಿ ಪ್ರಚಾರಕ್ಕೆ ತಂದ ಪ್ರಾಜೆಕ್ಟ್ ಪದ್ಧತಿಯ ಪಠ್ಯಕ್ರಮವೂ ಈ ರೀತಿಯದು. ಆದರೆ ಅದರಲ್ಲಿ ಸೇರಿರುವ ಯೋಜನೆಗಳು ವಿದ್ಯಾರ್ಥಿಗಳ ಆಸಕ್ತಿಯ ಉದ್ಯಮಗಳೇ ಹೊರತು ಲಾಭದಾಯಕ ಉದ್ಯಮಗಳಲ್ಲ.

	6 ಸಂಯೋಜಿದ ಪಠ್ಯಕ್ರಮ : ಸಾಂಪ್ರದಾಯಿಕ ಪಠ್ಯಕ್ರಮದಲ್ಲಿನ ವಿವಿಧ ವಿಷಯಗಳ ವಿವರವನ್ನು ಬೇರೆ ಬೇರೆ ವ್ಯಾಸಂಗ ವಿಷಯಗಳಾಗಿ ಜೋಡಿಸುವದರ ಬದಲು ಅವೆಲ್ಲ ವಿಷಯಗಳ ಅಂಶಗಳನ್ನು ಉಚಿತವಾಗಿ ಸಂಯೋಜಿಸಿಕೊಂಡು ಒಂದು ಸಮಗ್ರ (ಸಂಯೋಜಿತ) ವಿಷಯಕ್ಷೇತ್ರದಂತೆ ಜೋಡಿಸುವುದು ಈ ಪಠ್ಯಕ್ರಮದ ವೈಶಿಷ್ಟ್ಯ. ಅವೆಲ್ಲ ಒಂದಕ್ಕೊಂದಕ್ಕೆ ಸಂಬಂಧಿಸಿದ ಅಂಶವಾಗಿರುವುದರಿಂದ ಅವು ಪ್ರತ್ಯೇಕ ವಿಷಯಗಳೆಂಬ ಭಾವನೆ ಮಕ್ಕಳಿಗೆ ಬರುವುದಿಲ್ಲ.

 	7 ಸಂಪನ್ನಗೊಳಿಸಿದ ಪಠ್ಯಕ್ರಮ : ವಿದ್ಯಾರ್ಥಿಗಳ ಕಲಿಯುವ ಸಾಮಥ್ರ್ಯದಲ್ಲಿ ಭಿನ್ನತೆ ಕಂಡುಬರುತ್ತದೆಯಷ್ಟೆ. ಕೆಲವರು ಸಾಮಾನ್ಯ ಮಟ್ಟದ ಬುದ್ಧಿಶಕ್ತಿಯವರಾದರೆ ಮತ್ತೆ ಕೆಲವರು ಉನ್ನತ ಪ್ರತಿಭೆಯವರಾಗಿರುತ್ತಾರೆ. ಪ್ರತಿಭಾವಂತರು ಸಾಮಾನ್ಯರೊಡನೆ ಕಲಿಯುವುದೆಂದರೆ ಅವರಿಗೆ ಬೇಸರವಾಗುತ್ತದೆ. ಆದ್ದರಿಂದ ಅವರ ಪ್ರತಿಭೆಗೊಪ್ಪುವಂತೆ ಈ ಪಠ್ಯಕ್ರಮವನ್ನು ಸಂಪನ್ನಗೊಳಿಸಲಾಗಿದೆ. ಇದರಲ್ಲಿ ಎರಡು ವಿಧ. ಸಾಮಾನ್ಯ ಪಠ್ಯಕ್ರಮದಲ್ಲಿರುವ ವಿಸಯಗಳನ್ನೇ ಹೆಚ್ಚು ಆಳವಾಗಿ ವ್ಯಾಸಂಗ ಮಾಡಲು ಅನುಕೂಲಿಸುವಂತೆ ವಿಷಯ ವ್ಯವಸ್ಥೆ ಮಾಡುವುದು ಒಂದು. ಸಾಮಾನ್ಯ ಪಠ್ರಕ್ರಮದಲ್ಲಿರುವುದಕ್ಕಿಂತ ಹೆಚ್ಚು ಅಂಶಗಳನ್ನು ಸೇರಿಸುವುದು ಎರಡನೆಯದು.

	ಮೇಲೆ ಸೂಚಿಸಿದ ನೂತನ ಪ್ರವೃತ್ತಿಗಳು ಕೇವಲ ಪ್ರಾಯೋಗಿಕವಾಗಿ ಅಥವಾ ಪ್ರಾದೇಶಿಕವಾಗಿ ಪ್ರಚಾರದಲ್ಲಿವೆಯೆ ಹೊರತು ಸಾರ್ವತ್ರಿಕವಾಗಿ ಬಳಕೆಗೆ ಬಂದಿಲ್ಲ.									(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ